Monday, January 13, 2014

ಅಣ್ಣಾ ಬಾಂಡ್ ಚಿತ್ರದ "ಏನೆಂದು ಹೆಸರಿಡಲಿ ಈ ಚಂದ ಅನುಭವಕೆ"




ಅಣ್ಣಾ ಬಾಂಡ್ ಚಿತ್ರದ "ಏನೆಂದು ಹೆಸರಿಡಲಿ ಈ ಚಂದ ಅನುಭವಕೆ" ಹಾಡಿನ ಟ್ಯೂನ್ ಗೆ ಅನುಗುಣವಾಗಿ ಬರೆದಿರುವ ಸಾಲುಗಳು.


ಕನಸೊಂದು ತೋರಿಸಲೇ ಕಣ್ಮುಂದೆ ನವಿರಾಗಿ.
ಇದ್ದಂತೆ ಪ್ರೀತಿಸಲೇ ನಾನೀಗ ನೀನಾಗಿ.

ನೀ ನೀಡಿದ ಹೊತ್ತೆಲ್ಲ ಅಚ್ಚಾಗಿದೆ.
ಸದ್ದಿಲ್ಲದೇ ಎದೆಬಡಿತ ಹೆಚ್ಚಾಗಿದೆ.


ಮಗುವಂತೆ ಮುನಿದಂತೆ ಆಗಾಗ  ನಟಿಸಲು.
ಇರುಳಲ್ಲಿ ಕನಸಲ್ಲಿ ಬರುವೆನು ರಮಿಸಲು.

ಪ್ರೀತಿ ರೂಪತಾಳಿ ಬಂದ ತಂಗಾಳಿ ಕೈ ಮುಗಿದು.
ನಿನ್ನ ರೂಪ ತಿದ್ದೋ ಕಾರ್ಯ ಅನುಭವ ಹೊಸದು.


ಈ ಮೌನದ  ಕಾಗುಣಿತ ಶುರುವಾಗಿದೆ.
ನೀ ಹೇಳುವ ಮಾತೆಲ್ಲ ವರವಾಗಿದೆ.


ಕನಸೊಂದು ತೋರಿಸಲೇ ಕಣ್ಮುಂದೆ ನವಿರಾಗಿ.
ಇದ್ದಂತೆ ಪ್ರೀತಿಸಲೇ ನಾನೀಗ ನೀನಾಗಿ


ಮಿಂಚನ್ನ ಕೈ ಹಿಡಿಯೋ ಗುಡುಗಂತೆ ಬರುವೆನಾ
ಮುದ್ದಾದ ಬೆಳಕಿಂದ ಜಗವೆಲ್ಲ  ಹೊಸತನ . 

ಮೋಡದಲ್ಲಿ ಅವಿತು ಕುಳಿತ ಕನಸೆಂದು ಕರಗುವದು...?
ಜಾರಿ ಬಿದ್ದ ಹನಿಯ ಸದ್ದು ನೆನಪಿನ ಹಾಡು.

ಮಾತಿಲ್ಲದೆ ಮುತ್ತೊಂದು ರಫ್ತಾಗಿದೆ.
ಕಣ್ಣಲ್ಲಿಯೇ ಆ ಮುತ್ತು ಬೆಳಕಾಗಿದೆ.

ಪರಮಾತ್ಮ ಚಿತ್ರದ "ಹೆಸರು ಪೂರ್ತಿ ಹೇಳದೆ"

 



ಪರಮಾತ್ಮ ಚಿತ್ರದ "ಹೆಸರು ಪೂರ್ತಿ ಹೇಳದೆ"ಹಾಡಿನ ಟ್ಯೂನ್ ಗೆ ಬರೆದಿರುವ ಸಾಲುಗಳು. 

ಮೌನ ಮುರಿದು ನಿಂತಿದೆ 
ನಿನ್ನ ಹೆಸರು ಕೂಗಲೇ...
ಕೊರಳು ಬಿಗಿದು ಬಂದಿದೆ 
ಒಮ್ಮೆ ಅತ್ತು ನೋಡಲೇ...
ನಿನ್ನ ನೋವು ನನ್ನದೇ, ದೋಚಿ ಬಿಡಲೇ.....?

ಕನಸಲಿ ಹಾಜರಿಯನ್ನು ಬಯಸುವೆ ನಾನಿನ್ನು.
ಕಾವಲು ನಿಂತಿದೆ ಕಣ್ಣು ಬಿಡದೆ ಯಾರನ್ನು.

ತಂಪಿರದ ತಂಗಾಳಿಯು ಮುಂಗುರುಳ ಮೈ ಸೋಕಿದೆ.
ತಂಗಾಳಿಯಾಗಿ ಬದಲು,ನೀ ನೀಡಲು ನಾ ಎನೆನ್ನಲೇ....?

ಮುತ್ತು ತೇಲಿ ಬಂದಿದೆ
ಎಣಿಕೆ ಇಡದೆ ನೀಡಲೇ...
ಕಿವಿಯ ಓಲೆ ಕಾಡಿದೆ
ಒಮ್ಮೆ ಕದ್ದು ನೋಡಲೇ...
ಒಂದು ಮಾತು ಕೇಳದೆ ಅಪ್ಪಿ ಬಿಡಲೇ....?

ಕನಸೊಂದು ಕಣ್ಣಲ್ಲಿಯೇ ಮುಚ್ಚಿಟ್ಟ ಗುಟ್ಟಾಗಿದೆ.
ನಿನ್ನ ನೋಟ ಕಂಡಾಗಲೇ,ಓಡುತಿಹುದು ಗುಟ್ಟು ನಿನ್ನಕಡೆಗೆ...

ಹೂವು ಕೈಯ ಚಾಚಿದೆ
ನಿನ್ನ ಅಂದ ನೀಡಲೇ...
ನೀನು ನನ್ನ ಪಾಲಿಗೆ
ದೇವರೆಂದು ತಿಳಿಯಲೇ...
ರೆಪ್ಪೆ ಕಾದು ಸೋತಿದೆ ಮುಚ್ಚಿಬಿಡಲೇ....?

ಹಂಬಲದ ಹೂ




ದೃಶ್ಯ  - 1

ಆಸ್ಪತ್ರೆ - ಒಳಾಂಗಣ

[ ರಸ್ತೆಯ   ವಾಹನಗಳ   ಸದ್ದು  ಮತ್ತು  ಆಸ್ಪತ್ರೆಯ   ತುಂಬಾ  ಹರಿದಾಡುವ  ಜನರ  ತಡೆರಹಿತ  ಸದ್ದು  ಕೇಳುತ್ತ  ಮಂಪರಿನಲ್ಲಿ  ಶಶಾಂಕ್   ಕಿಟಕಿಯಾಚೆ  ಕಣ್ಣರಳಿಸಿ  ನೋಡುತ್ತಾನೆ.

ಕೆಲಸದವಳ  ಕಡೆಗೆ  ಓರೆಗಣ್ಣಿನಿಂದ ಸೂಕ್ಷ್ಮವಾಗಿ   ಗಮನಿಸಿ ,ಶಶಾಂಕನ  ಪಕ್ಕದ  ಮಂಚದ  ಮೇಲೆ  ಮಲಗಿರುವ  ನೇಪಾಳಿ  ಯುವಕನ  ಕಡೆಗೆ  ನರ್ಸಮ್ಮ  ಬರುವಳು ]

ನರ್ಸಮ್ಮ : (ರಿಪೋರ್ಟ್  ನೋಡುತ್ತಾ , ಗಟ್ಟಿಯಾಗಿ ) ಡಾಕ್ಟ್ರು  ವಿಸಿಟಿಂಗ್  ಗೆ  ಬರೋ ಟೈಮಾಯ್ತು  ,ಅವರು  ಬರೋಷ್ಟರೊಳಗೆ ಟಾಯ್ಲೆಟ್  ಕ್ಲೀನ್ ಆಗಿರಬೇಕು.

ಕೆಲಸದವಳು : (ಮೂಗು  ಮುರಿಯುತ್ತ   ವ್ಯಂಗವಾಗಿ ) ಹಾ  ಆಯ್ತು ಅಮ್ಮಾವ್ರೆ....ಅದೇ ಕೆಲಸದ  ಮೆಲಿದ್ದಿನಿ (ಹಳೆ  ಪೇಪರ್   ಓದುತ್ತ   ಕುಳಿತವಳು  ಅಲ್ಲಿಂದ  ಹೊರಗೆ  ಹೋಗುವಳು )

ನರ್ಸಮ್ಮ  : (ನೇಪಾಳಿಗೆ) ಬೆಳಿಗ್ಗೆಯಿಂದ  ಏನು  ತಿಂದಿಲ್ಲ  ತಾನೇ....?

ನೇಪಾಳಿ ಯುವಕ : (ಇಲ್ಲ  ಅಂತ  ಗೋಣು  ಅಲುಗಾಡಿಸುವನು )


ನರ್ಸಮ್ಮ : (ರಿಪೋರ್ಟ್  ತಿದ್ದುತ್ತ  ) ಡಾಕ್ಟ್ರು  ಬಂದಿದ್ದಾರೆ ....ಈಗ  ಸ್ವಲ್ಪ  ಹೊತ್ತಲ್ಲೇ  ಆಪರೇಷನ್   ಶುರು  ಮಾಡಬೇಕು. toilet ಗೆ  ಬೇಕಾದರೆ  ಹೋಗಿಬನ್ನಿ.(ರಿಪೋರ್ಟ್  ಅಲ್ಲೇ  ಇಟ್ಟು   ಅಲ್ಲಿಂದ  ಹೊರಡುವಳು).


(ನೇಪಾಳಿ  ಯುವಕ  ಶಶಾಂಕನನ್ನು  ಯವಯಿಕ್ಕದೆ  ನೋಡುತ್ತಿರುತ್ತಾನೆ ).

ಶಶಾಂಕ್  : (ಹುಬ್ಬು  ಹಾರಿಸಿ ) ಏನು....?

ನೇಪಾಳಿ  ಯುವಕ  : (ಪಟಕ್ಕನೆ  ಕಳ್ಳನಂತೆ  ಕಣ್ಣು  ಮುಚ್ಚುತ್ತಾನೆ )  

ಶಶಾಂಕ್  : (ನಗುತ್ತಾ )ಹೆದರಬೇಡ.....ಆಪರೇಷನ್  ಅಂದ್ರೆ ಒಂದು  ಸುಧೀರ್ಘ ನಿದ್ರೆ . ಡಾಕ್ಟ್ರು ,ನರ್ಸು ಕೈಯಿಂದ ಸೇವೆ ಮಾಡಿಸಿಕೊಳ್ಳೋ ಮಹಾ ನಿದ್ರೆ.ಎಚ್ರ ಆದಾಗ ಎಲ್ಲ ಆಗಿರ್ತದೆ.ಹೊಸದಾಗಿ.

ನೇಪಾಳಿ ಯುವಕ  : (ಗಾಬರಿಯಿಂದ ) ಈ   ಆಪರೇಷನ್  ಥಿಯೇಟರ್   ಗೆ  ಒಂದು  ಹಿಂಬಾಗಿಲು  ಇರ್ತದಂತೆ . ಔಟ್   ಆದ್ರೆ  ಆ   ಬಾಗಿಲನಿಂದಲೇ  ಹೊರಗೆ  ಕಳಿಸ್ತಾರಂತೆ.... ಹೌದೆ ....?

ಶಶಾಂಕ  : ಛೆ ...! ಛೆ ..! ಹಾಗೇನಿಲ್ಲ....!ನಿಮಗೀನಾಗಿದೆ....?ನಮ್ಮೆಲರಿಗಿಂತ   ಬೇಗ  discharge   ಆಗಿ  ಮನೆಗೆ  ಹೋಗುವವರು ನೀವು . ನನ್ನ  ಅವಸ್ಥೆ  ನೋಡಿ ...ನನಗೇನು  ರೋಗ  ಅಂತ  ಆ  ಡಾಕ್ಟರ್ಗೆ  ಇನ್ನು  ಪತ್ತೆ  ಆಗ್ತಾ  ಇಲ್ಲ . ದಿನಕ್ಕೊಂದು  ಪರೀಕ್ಷೆ  ಅಂತ  ಜೀವ  ಹಿಂಡ್ತಾ  ಇದ್ದಾರೆ . ನನ್ನ  ರಕ್ತವೆಲ್ಲ   ಪರೀಕ್ಷೆಗೆ  ಹಾಳಾಗಿ ಹೋಗುತ್ತದೇನೋ ......!

(ಇಬ್ಬರು  ನಗುವರು )

ನರ್ಸಮ್ಮ  2 : ಶಶಾಂಕ್ , ನಿಮ್ಮ   ಸ್ಕಾನ್ನಿಂಗ್   ಹನ್ನೊಂದು  ಗಂಟೆಗಿದೆ . ಏನು  ತಿನ್ನಬೇಡಿ . ತುಂಬಾ  ನೀರು  ಕುಡಿರಿ . T ವಾರ್ಡ್ ಗೆ  ಹೋಗಿ  ಈ   ಚೀಟಿ  ಬರೆಸಿಕೊಂಡು  ಬನ್ನಿ (ಚೀಟಿ ಕೊಟ್ಟು ಆತುರದಿಂದಲೇ ಹೋಗುವಳು )

[ಶಶಾಂಕ್ ಮತ್ತು ನೆಪಾಲಿ ಯುವಕ ಇನ್ನು ಜೋರಾಗಿ ನಗುವರು.ಶಶಾಂಕ್ ಅಲ್ಲಿಂದ ಹೊರಡುವನು.]



ದೃಶ್ಯ 2.

ಅಸ್ಪತ್ರೆಯ ಲಿಫ್ಟು : ಒಳಾಂಗಣ 

[ ಸ್ಕಾನ್ನಿಂಗ್ ಕಡೆಗೆ ಹೊರಟಿರುವ ಶಶಾಂಕ್, ಲಿಫ್ಟು ಹತ್ತುತ್ತಾನೆ.ಕೈಯಲ್ಲಿ ಸಲೈನ್  ಹಿಡಿದಿಟ್ಟುಕೊಂಡಿರುವ  ಆಯಮ್ಮ  ನಾಲ್ಕನೇಯ   ಅಂತಸ್ತಿಗೆ ಒಂದು ವ್ಹೀಲ್ ಚೇರ್ ತಳ್ಳುತ್ತ ಬರುವಳು.ಲಿಫ್ಟ್ ನಲ್ಲಿಯ ಜನರೆಲ್ಲಾ ಬ್ರೆಡ್ಡು,ಚಹದ ಫ್ಲಾಸ್ಕು,ಮಾತ್ರೆ,ಚೀಟಿ ಎದೆಗವಚಿ ಲಿಫ್ಟ್ ನ ಅಂಕಿಗಳನ್ನ ಗಂಭಿರವಾಗಿ ನೋಡುತ್ತಿರುತ್ತಾರೆ.ಅಷ್ಟರಲ್ಲಿ ಶಶಾಂಕ್ ವ್ಹೀಲ್ ಚೇರ್ ನಲ್ಲಿರುವರನ್ನು ನಿರುಕಿಸಿ ನೋಡುತ್ತಾನೆ.]

ಶಶಾಂಕ್ : (ಆಶ್ಚರ್ಯದಿಂದ,ಮೆದುವಾದ ಧ್ವನಿಯಲ್ಲಿ ) ಅರೆssss ....ಸರೋಜಿನಿ ಅಲ್ಲವೇ....?

[ ಅಷ್ಟರಲ್ಲಿ ಲಿಫ್ಟ್ವ್ಹೀ ನ ಬಾಗಿಲು ತೆರೆಯುವದು ವ್ಹೀಲ್ ಚೇರ್ ತಳ್ಳುತ್ತ ಆಯಮ್ಮ ಮುನ್ನಡೆಯುವಳು]
[ ಲಿಫ್ಟ್ ನ ಬಾಗಿಲು ತಡೆ ಹಿಡಿದು ವ್ಹೀಲ್ ಚೇರ್ ಹಿಂದೆಯೇ ಕಳೆ ಇಲ್ಲದ ಮುಖ ಹೊತ್ತು ಶಶಾಂಕ್ ಹಿಂಬಾಲಿಸುತ್ತಾನೆ ]



ದೃಶ್ಯ ೪ 
ವಾರ್ಡ್ - ಒಳಾಂಗಣ 

[ ಆಯಮ್ಮ ಸರೋಜಿನಿಯನ್ನ ವ್ಹೀಲ್ ಚೇರ್ ಯಿಂದ ಮಂಚಕ್ಕೆ ಹಸ್ತಾಂತರಿಸುತ್ತಾರೆ]
[ವಾರ್ಡ್ ಹೊರಬಂದು ಬಾಗಿಲು ಹಾಕುತ್ತಾರೆ ]
ಶಶಾಂಕ್ : (ತೊದಲುತ್ತ,ಹತ್ತಿರ ಹೋಗಿ) ಇವರು...... ಸರೋಜಿನಿ ಅಲ್ಲವೇ ....?

ಆಯಮ್ಮ : ಹೌದು....ಪರಿಚಯವೇ......? ಈಗ ರೌಂಡ್ಸ್ ಸಮಯ ಆಮೇಲೆ ಬನ್ನಿ.

[ ನಿರಾಸೆಯಿಂದ ಕಿಟಕಿಯಿಂದ ಸರೋಜಿನಿಯನ್ನ ನೋಡುತ್ತಾನೆ.ಒಣ  ಬಕುಲದ  ಹೂವು ಗಮನಿಸುತ್ತ ಅಲ್ಲಿಂದ  ಹೊರಡುವನು]

ಅವಳ ಬಗ್ಗೆ ಯೋಚನೆ ಮಾಡುತ್ತಾ ಅವರಿರ್ವರ ಕೊನೆಯ ಭೇಟಿಯ ನೆನೆಪಿಸಿಕೊಳ್ಳುತ್ತಾ ತನ್ನ ವಾರ್ಡ್ ಕಡೆಗೆ ಹೋಗುವನು.
ಫ್ಲಾಶ್ ಬ್ಯಾಕ್
[ ಜೋರಾಗಿ ಸುರಿಯುವ ಮಳೆ , ಮಳೆಯಲ್ಲೇ ತೊಯ್ಸಿಕೊಂಡು ಸರೋಜಿನಿ ಶಶಾಂಕನ ರೂಮಿನೆಡೆಗೆ ಬರುವಳು. ಇಲ್ಲಿ ಶಶಾಂಕ ಕೊಳೆಯಾಗಿರುವ ರೂಮು,ಮೈಮೇಲೆ ಹೊತ್ತಿಕೊಂಡು.ಚಾಪೆಯಮೇಲೆ bedsheet ಹೊಚ್ಚಿಕೊಂಡು ಮಲಗಿರುತ್ತಾನೆ]
ಧಡಾರನೆ ಬಾಗಿಲು ತೆರೆದು

ಸರೋಜಿನಿ : ಡಿಸೈಡ್ ಮಾಡು, ಡಿಸೈಡ್ ಮಾಡು ಜಾತಿ ಗೀತಿ ಮನೆ ಹಾಳಾಯ್ತು . ಇಬ್ರು ಒಟ್ಟಿಗಿರೋಣ ಅಂತಿದ್ರೆ ಡಿಸೈಡ್ ಮಾಡು. ನಮ್ಮನೆಗೆ  ಬಾ ...ಹೇಳು ....ಇವತ್ತು....ಈಗ.....!

ಶಶಾಂಕ : [ಕಣ್ಣೋರಿಸುತ್ತ ಕತ್ತೆತ್ತಿ ನೋಡುವನು. ಅವಳನ್ನ ನೋಡಿ ದಣಿದವರಂತೆ ಮತ್ತೆ ಮುಖ ಕೆಳಗೆ ಹಾಕುವನು.] ಬಾ ಕುಳಿತ್ಕೋ

[ಕೆಲಹೊತ್ತು ಅವರಿರ್ವರ ಮಾತಿನ ಚಕಮಕಿ(ಸೈಲೆಂಟ್ ಮೋಡ್ ಲ್ಲಿ )]

ಸರೋಜಿನಿ : [ಸಿಟ್ಟಾಗಿ ಅಲ್ಲಿಂದ ಹೋಗುವಳು ]

ಶಶಾಂಕ : [ಒದ್ದೆಯಾದ ಕಾಲಿನಿಂದ ಮೂಡಿದ ಅವಳ ನೀರಿನ ಹೆಜ್ಜೆ ನೋಡುತ್ತಾ ಕುಳಿತುಕೊಳ್ಳುವನು]

fadeout
ಬ್ಯಾಕ್ ಟು ಮೇನ್ ಸ್ಟ್ರೀಮ್ ಸ್ಟೋರಿ .


ದೃಶ್ಯ 4

ಅವಳು ಇಲ್ಲಿಗೆ ಯಾಕೆ ಬಂದಳು ಅಂತ ಯೋಚನೆ ಮಾಡುತ್ತಾ ವಾರ್ಡ್ ಕಡೆಗೆ ಬರುವನು.ವಾರ್ಡ್ನಲ್ಲಿ ನೇಪಾಳಿ ಯುವಕನ ಬೆಡ್ ಖಲಿಯಿರುವದು ನೋಡಿ ಆಪರೇಷನ್ ಗೆ ಹೋಗಿದ್ದು ಗೊತ್ತಾಗುತ್ತದೆ.ತುಸು ಹೊತ್ತು ಮಲಗುತ್ತಾನೆ.ಎದ್ದ ತಕ್ಷಣ ಏನೋ ಕಳೆದುಕೊಂಡವರಂತೆ ಸರೋಜಿನಿಯ ವಾರ್ಡ್ ಕಡೆಗೆ ಧಾವಿಸುವನು.ಆಯಮ್ಮ ಇವನು ಬಂದದ್ದು ನೋಡಿ 'ಹೋಗಿ ನೋಡಿ' ಎನ್ನುವಂತೆ ಸನ್ನೆ ಮಾಡುವಳು.ಮಂಚದ ಅಡಿಗೆ ಇಟ್ಟ ಸ್ಟೂಲನ್ನು ಸದ್ದಾಗದಂತೆ ಎಳೆದು,ಹಗುರವಾಗಿ ಕೂತು,ಹೊಸ ಮಗುವನ್ನು ನೋಡುವಂತೆ ನೋಡುವನು.
ಅವಳನ್ನೇ ನೋಡುತ್ತಾ ಕೈ ಹಿಡಿದು ಕುಳಿತಿರುವಾಗ.ಮುಂಚೆ ಬಂದು ಹೋದ 'ಡಿಸೈಡ್ ಮಾಡು' ಅನ್ನೋ ಡೈಲಾಗು (ಫ್ಲಾಶ್ ಬ್ಯಾಕ್) ಒಂದ್ ಸಲ ಕಣ್ಣೆದುರು ಬಂದು ಹೋಗುವದು
ತುಸು ನಗುವನು.

ಯಾರೋ ಒಬ್ಬರು(ವಯಸ್ಸು ಮೂವತ್ತರ ಮೇಲೆ ಸಭ್ಯ ಗೃಹಸ್ಥನಂತೆ) ಕೈಯಲ್ಲಿ ಔಷಧಿ,ಹಣ್ಣು ಹಂಪಲುಗಳ ಒಂದು ಪ್ಲಾಸ್ಟಿಕ್ ಚೀಲ ಹೊತ್ತು ಅಧಿಕೃತವಾಗಿ ಒಳಬರುವನು. ಶಶಾಂಕ್ ನಿಲ್ಲುವನು.
ಚೀಲ ಪಕ್ಕಕ್ಕಿಟ್ಟು.
ಸಂಬಂಧಿಕ  : (ಮುಗುಳ್ನಗು ಕೊಟ್ಟು ) 'ನೀವ್ಯಾರು ಅಂತ ಗೊತ್ತಾಗಲಿಲ್ಲವಲ್ಲ ?'

ಶಶಾಂಕ : ಸರೋಜಿನಿ ಕಾಲೇಜಿನಲ್ಲಿರುವಾಗ ಗುರುತು...! ಅವಳು ಆರ್ಟ್ಸು...ನಾನು ಸಾಯನ್ಸು .....!

ಸಂಬಂಧಿಕ  : ಟೆಸ್ಟ್ ಗಾಗಿ ತುಂಬಾ ಔಷಧಿ ಕೊಡ್ತಾರಲ್ಲ,ನಿನ್ನೆಯಿಂದ ತುಂಬಾ ನಿದ್ದೆಯಲ್ಲಿದ್ದಾಳೆ.ಎಚ್ಚರಾಗದ ತುಂಬಾ ಮಾತಾಡ್ತಾಳೆ.ಅವಳು ಎಚ್ಚರಾದಾಗ ಕರಿತಿನಿ.ನಿಮ್ಮ ವಾರ್ಡ್ ನಂಬರ್ ಕೊಡಿ.

ವಾರ್ಸ್ ನಂಬರ್ ಕೊಡುವನು

ಶಶಾಂಕ್ : ಏನಾದ್ರು ಬೇಕಾದರೆ ಕರೀರಿ....!

ಅಲ್ಲಿಂದ ಹೊರತು ಹೋಗುವನು.


ದೃಶ್ಯ 5 (ಶಶಾಂಕನ ವಾರ್ಡ್ )

[ತುಂಬಾ ಸಮಯದ ನಂತರ......]
 ಕಾಯುತ್ತ ನಿಂತ ನರ್ಸ್  ಶಶಾಂಕ್ ಬಂದ ಕೂಡಲೇ ಔಷಧಿ ನುಂಗಲು ಹೇಳುತ್ತಾಳೆ ಬಾಯಿಯೊಳಗೆ ಥರ್ಮಾ ಮೀಟರ್ ಇಟ್ಟು ನಾಡಿ ನೋಡುತ್ತಾಳೆ . ಯಾರೋ ಕರೆದರಂತ ನರ್ಸು ಪಕ್ಕದ ರೂಮಿಗೆ ಹೋಗುತ್ತಾಳೆ.
ಅಷ್ಟೊತ್ತಲ್ಲಿ  ಸರೋಜಿನಿಯ ಸಂಬಂಧಿಕ ಓಡಿ ಬಂದು ಎಬ್ಬಿಸುವನು.

ಸಂಬಂಧಿಕ : ಬನ್ನಿ ಬನ್ನಿ ಸರೋಜಿನಿ ಕರೆಯುತ್ತಿದ್ದಾಳೆ.ನಿಮ್ಮ ಹೆಸರು ಹೇಳಿದ ತಕ್ಷಣ ಅರೇ ಅಂತ ಕಿರುಚಿಕೊಂಡಳು.ನಿಮ್ಮನ್ನ ನೋಡಲು ಹಠ ಮಾಡುತ್ತಿದ್ದಾಳೆ ಬೇಗ ಬನ್ನಿ.

ಥರ್ಮಾ ಮೀಟರ್ ಪಕ್ಕಕ್ಕೆ ಎಸೆದು,ಗಡಿಬಿಡಿಯಿಂದ  ಹವಾಯಿ ಚಪ್ಪಲಿಯನುಟ್ಟು ಅಲ್ಲಿಂದ ಹೋಗುವನು. ಬೆಡ್ ಪಕ್ಕದಲ್ಲೇ ಬಿದ್ದಿರುವ ಥರ್ಮಾ ಮೀಟರ್ ನೋಡಿ ಸೊಂಟದ ಮೇಲೆ ಕೈ ಇಟ್ಟು ನರ್ಸು ಒಮ್ಮೆ ಉಸಿರು ಬಿಡುವಳು.


ದೃಶ್ಯ 6 (ಸರೋಜಿನಿ ವಾರ್ಡ್ ಗೆ ಹೋಗುವ ದಾರಿ )

ಇಬ್ಬರು ಮಾತನಾಡುತ್ತ ಚಲಿಸುತ್ತಾರೆ

ಸಂಬಂಧಿಕ : ನಿಮಗೊಂದು ವಿಷಯ ಹೇಳಬೇಕು. ನಾವು treatment ಒಂದು ಮುಖ್ಯ ಪಾಯಿಂಟ್ ಲ್ಲಿದಿವಿ. ಅಂದ್ರೆ ಇನ್ಮುಂದೆ ಟ್ರೀಟ್ಮೆಂಟ್ ಮುಂದುವರೆಸಿದರೆ ಅವಳ ನೆನಪು,ಸ್ವಭಾವದ ಲಕ್ಷಣಗಳು ಎಲ್ಲ ಕ್ರಮೇಣ ಕಡಿಮೆ ಆಗಬಹುದು ಎಂದು ಡಾಕ್ಟ್ರು ಹೇಳ್ತಾರೆ.ಹಾಗಂತ ಅವಳ ಸ್ವಭಾವ ಲಕ್ಷಣ ಬೇಕು ಅಂತ  ಔಷಧಿ ನಿಲ್ಲಿಸಿ ಬಿಟ್ರೆ ಅವಳ ಜೀವಕ್ಕೆ ಅಪಾಯ. ಏನ್ಮಾಡಬೇಕು ಅನ್ನೋದೇ ತಿಳಿತಿಲ್ಲ.

ಶಶಾಂಕ್ : ನಿಮ್ಮದು ಯಾವ ಸ್ಟೇಜಿನಲ್ಲಿದೆ ?

ಸಂಬಂಧಿಕ : ಗೊತ್ತಿಲ್ಲ....!

ಲಿಫ್ಟು ಬಾಗಿಲು ತೆರೆಯುವದು.

ಅವರ ಬರುವಿಕೆಗೆ ಕಾಯುವಂತೆ ಬಾಗಿಲಿಗೇ ಕಣ್ಣಿಟ್ಟು ಮಲಗಿರುತ್ತಾಳೆ .ವಾರ್ಡ್ ಒಳಗೆ ಹೋಗುವರು.

ದೃಶ್ಯ 7

{ಸ್ವಲ್ಪ ಸ್ಲೋ ಮೋಶನ್ ಲ್ಲಿ,ಸ್ವಲ್ಪ ಒದ್ದೆಯಾದ ಕಣ್ಣಿಂದ ಶಶಾಂಕ. ಬ್ಯಾಕ್ ಗ್ರೌಂಡ್ ಲ್ಲಿ ಒಂದು patho ಸಾಂಗು ಇದ್ರೂ ಪರವಾಗಿಲ್ಲ }

ಶಶಾಂಕ್ : ಸರೋಜಿನಿ....?

ಸರೋಜಿನಿ : (ಮುಗುಳ್ನಕ್ಕು ಕಣ್ ಸನ್ನೆಯಿಂದ )ಬಾ ಕೂತ್ಕೋ...!

ಶಶಾಂಕ್ : (ಅವಳ ಮೃದುವಾದ ಕೈ ಮುಟ್ಟಿ )ಏನಾಯ್ತು...?

ಸರೋಜಿನಿ : [ಏನಿಲ್ಲ ಅನ್ನುವಂತೆ ಗೋಣು ಅಳುಗಾಡಿಸುವಳು.]
                 [ನೀನೇನು ಇಲ್ಲಿ ಅನ್ನುವಂತೆ ಸನ್ನೆಯಲ್ಲೇ ಕೇಳುವಳು ]

ಶಶಾಂಕ್ : ಮಾಮೂಲಿ ಚೆಕ್ ಅಪ್

ಸರೋಜಿನಿ : ಸುಮ್ನೆ ಹೇಳ್ಬೇಡ ..!ಯಾರು ಇಂಥ ದೊಡ್ಡ ಆಸ್ಪತ್ರೆಗೆ ಮಾಮೂಲಿ ಚೆಕ್ ಅಪ್ ಗೆ ಅಂತ ಬರೋದಿಲ್ಲ.

ಶಶಾಂಕ್ : ಹಣೆಯ ಮೇಲೆ ಕೈ ಸವರಿ ಮುಗುಳ್ನಗುವನು

ಸರೋಜಿನಿ  : ಸರಿ ಹೇಳಬೇಡ.
                   (ಮೈ ಸ್ವಲ್ಪ ಅಲುಗಾಡಿಸಿ ಅವನನ್ನ ಕಣ್ತುಂಬ ನೋಡಿ  ) ಮತ್ತೆ ....?

ಶಶಾಂಕ : ಉತ್ತರ ಕೊಡದೆ ಸುಮ್ನೆ  ಅವಳನ್ನೇ ನೋಡುವನು.

ಸರೋಜಿನಿ : (ನಗುತ್ತ)ನೀನು ಕಾಲೇಜಿನಲ್ಲಿರುವಾಗ ವರ್ಷಪೂರ್ತಿ ಎರಡು ಶರ್ಟ್ ಅಂದು ಪ್ಯಾಂಟು ಹಾಕ್ತಿದ್ದೆ.

ಶಶಾಂಕ್ : ಹೌದು ಎನ್ನುವಂತೆ ನಗುತ್ತ ಗೋಣು ಅಲುಗಾಡಿಸುವನು.

ಸರೋಜಿನಿ : ನೋಡು ನನ್ ಕೈ ಊಟ ಮಾಡದೇ ಎಷ್ಟು ಸೊರಗಿ ಹೋಗಿದ್ದಿಯ.
                  ಮನೆಗೆ ಬಾ ಅಜ್ಜಿ ನಿಂಗೆ ಯಾವಾಗಲು ಕೇಳ್ತಾನೆ ಇರ್ತಾಳೆ.
                  ನಾವಿಬ್ರು ಕೊನೆಯದಾಗಿ ಮಾತಾಡಿದ್ದು ಯಾವಾಗ ಅಂತ ನೆನಪಿಗೆ ಬರ್ತಾ ಇಲ್ವಲ್ಲ....

[ಒಮ್ಮಿಂದೊಮ್ಮೆಲೆ,ನಿಧಾನವಾಗಿ ಅವಳ ಕಣ್ಣು ಮಂಜಾಗುವದು...ಶಶಾಂಕ್ ಗಾಬರಿಯಾಗುವನು.ಆ ಕಡೆಯಿಂದ ನರ್ಸು ಬಂದು ಅವಳ ಸಲೈನ್ ಗೆ ಒಂದು ಇಂಜೆಕ್ಷನ್ ಚುಚ್ಚಿ.]

ನುರ್ಸು : ಮಾತ್ರೆ ಯಿಂದ ನಿದ್ದೆ.....! ಗಾಬರಿಯಾಗಬೇಡಿ....!ಒಂದೆರೆಡು ಗಂಟೆ ಬಿಟ್ಟು ಬನ್ನಿ....ಮತ್ತೆ ಎಚ್ಚರ ಆಗ್ತಾರೆ.

ಶಶಾಂಕ್ ಕಣ್ಣಿರು ಇಡುತ್ತ ಹೊರ ಹೋಗುವನು.ಶೂನ್ಯ ಕವಿದಂತೆ , ಅಲ್ಲಿರುವದಕ್ಕಗದೆ ತನ್ನ ವಾರ್ಡ್ ಕಡೆಗೆ ಹೋಗುವನು.

ದೃಶ್ಯ 8 (ಶಶಾಂಕನ ವಾರ್ಡ್ : ಆ ದಿನದ ಮಧ್ಯ ರಾತ್ರಿ)
ರಾತ್ರಿ ಎಷ್ಟೋ ಹೊತ್ತು ನಿದ್ದೆ ಇಲ್ಲದೆ ಹೊರಳಾಡುತ್ತಾನೆ. ಬೆಳಿಗ್ಗೆ ತಡವಾಗಿ ಎಚ್ಚರವಾಗುತ್ತದೆ. ಸರೋಜಿನಿಯ ಸಂಬಧಿಕ ಬರುವನು. ಇವನು ಎದ್ದು ಕುಳಿತುಕೊಳ್ಳುವನು.ಅವನು ಪಕ್ಕದಲ್ಲೇ ಬಂದು.

ಸಂಬಂಧಿಕ : ನೋಡಿ....ನಾವು ನಾಳೆಯೇ ಡಿಸೈಡ್ ಮಾಡಬೇಕು.ಅವಳು ಉಳಿಯಬೇಕು.ಅವಳನ್ನು ಉಳಿಸಿಕೊಳ್ಳಲು ನಾವು ಏನು ಮಾಡಲು ಸಿದ್ಧ.ದಯವಿಟ್ಟು ಟ್ರೀಟ್ಮೆಂಟ್ ಮುಂದುವರೆಸಲು ನಮಗೆ ನೇರವಾಗಿ.

ಶಶಾಂಕ್ : (ಗಲಿಬಿಲಿಗೊಂಡು )ನೋಡಿ ಅವಳ ನೆಮ್ಮದಿ ಮುಖ್ಯ ತಾನೇ..ಅವಳಿಗೆ ಹೇಗೆ ಬೇಕೋ ಹಾಗೆ ಡಿಸೈಡ್ ಮಾಡಿ.

ಸಂಬಂಧಿಕ : ಅಯ್ಯೋ ನಿಮಗೆ ಅರ್ಥ ಆಗ್ತಿಲ್ಲ......ನಿಮ್ಮನ್ನ ಕಂಡ ಮೇಲೆ ರೆಚ್ಚೆ ಹಿಡಿದು ಕುಳಿತಿದ್ದಾಳೆ. ಟ್ರೀಟ್ಮೆಂಟ್ ಬೇಡ ಅಂತಿದ್ದಾಳೆ. ಟ್ರೀಟ್ಮೆಂಟ್ ನಿಂದ ನೆನಪು,ಹುರುಪು ಕಡಿಮೆ ಆಗ್ತಿದೆ ಅಂತ ಅವಳಿಗೆ ಗೊತ್ತಿದೆ.ಇಲ್ಲಿಯವರೆಗೂ ಟ್ರೀಟ್ಮೆಂಟ್ ಬೇಡ ಅಂದವಳೇ ಅಲ್ಲ. ನೀವು ಬಂದು ಹೋದ ಮೇಲೆ ಹುಚ್ಚಿ ಥರ ಆಡ್ತಿದ್ದಾಳೆ.ಟ್ರೀಟ್ಮೆಂಟ್ ಮುಂದುವರೆಸಿದ್ರೆ ಕಿಟಕಿಯಿಂದ ಜಿಗಿತಿನಿ ಅಂತಿದ್ದಾಳೆ.ನನಗೇನು ತೋಚ್ತಾ ಇಲ್ಲ.

ವಾರ್ಡ್ ನಿಂದ ಯಾರೋ "ಶ: ಶ :"ಅಂದಿದ್ದೆ ತೋಳಿನಿಂದ ಕಣ್ಣು ಒರೆಸುತ್ತಾ

ದಯವಿಟ್ಟು ಮತ್ತೆ ಅವಳನ್ನ ನೋಡುವದಕ್ಕೆ ಬರಬೇಡಿ ಎಂದು ಹೇಳಿ ಅಲ್ಲಿಂದ ಹೊರಟು ಹೋದ.

ಸರೋಜಿನಿ ಸಂಬಂಧಿಕನ ಮಾತು ಕೇಳಿ ದಿಗಿಲು ಬಡಿದಂತಾಗುವದು
ಟ್ರೀಟ್ಮೆಂಟ್ ಅರ್ದಕ್ಕೆ ಮುಗಿಸಿಕೊಂಡು.ಬಿಲ್ಲು ಪಾವತಿಸಿ ಆಸ್ಪತ್ರೆಯಿಂದ ಹೊರಟುಹೊಗುವನು.






           


















ಡ್ರಾಮಾ ಚಿತ್ರದ "ಚೆಂದುಟಿಯ ಪಕ್ಕದಲಿ"



ಡ್ರಾಮಾ ಚಿತ್ರದ "ಚೆಂದುಟಿಯ ಪಕ್ಕದಲಿ" ಹಾಡಿನ ಟ್ಯೂನ್ ಗೆ ಕೆಳಗಿನ ಸಾಲುಗಳು  



ಒಲವಿಂದು ಚಿಗುರೊಡೆದು
ನಿನ್ನೆದುರು ಚದುರಾಡಿ
ಮೈ ಮರೆತು ನಿಂತಿರುವೆ ಅನುರಾಗಿ.

ನೀನಿರದ ಹೊತ್ತಲ್ಲಿ
ನಾ ಕಂಡ ಸ್ವಪ್ನಗಳು   
ಕೈ ಮೀರಿ ಜಾರುತಿವೆ ಸಾಲಾಗಿ


ಕಣ್ಣಿಂದ ಕೈ ಜಾರಿ ಕನಸಾಗಿ  
ಕಟ್ಟೋಣ ಈ ಕನಸು ಬಿಗಿಯಾಗಿ
ಸ್ವೀಕರಿಸು ಈ ಮಾತು ಗುಟ್ಟಾಗಿ. 

ಒಲವಿಂದು ಚಿಗುರೊಡೆದು.....   


ಶೃಂಗಾರ ತಲೆಬಾಗೋ ಈ ನಿನ್ನ ಅಂದವನು
ಸಿಂಗರಿಸಿ ಬರಬೇಡ ನೀನೆಲ್ಲೂ ಹೊರಗೆ...
ಹೊಸ್ತಿಲಲಿ ಕಾಯುತ್ತ ನಿಂತಿರುವ ಮಧುಚಂದ್ರ
ದಿಗಿಲಾಗಿ ಬರುತಿಹನು ಕಟ್ಟುತ್ತ ತೆರಿಗೆ...

ತೆರೆದಾಗ ಈ ಕಣ್ಣು ನಿನಗಾಗಿ
ಸುಳಿಬೇಕು ನೀ ತಂಪು ಬೆಳಕಾಗಿ
ಸ್ವೀಕರಿಸು ಈ ಸ್ಪರ್ಶ ಗುಟ್ಟಾಗಿ. 


ಒಲವಿಂದು ಚಿಗುರೊಡೆದು.....    


ಈ ನಿನ್ನ ಮುಂಗುರುಳ ಸೋಕಿರವ ತಂಗಾಳಿ
ಜಗವೆಲ್ಲ ಘಮಘಮಿಸು ಗುರಿಹೊತ್ತ ಹೂವು. 
ನೀ ಅಡಗಿ ನಿಂತಿರುವೆ ನಾ ನಿನ್ನ ಕರೆದಾಗ
ಆತುರದ ಒಲವಿಂದು ಕಾದಷ್ಟು ಕಾವು.


ಅಳುವಾಗ ನಾ ಸಣ್ಣ ಮಗುವಾಗಿ
ಇರಬೇಕು ನೀ ಎದುರು ಮಡಿಲಾಗಿ
ಸ್ವೀಕರಿಸು ಈ ಮೌನ ಗುಟ್ಟಾಗಿ.